ಏಡಿಗಂತಿ ಸಂಶೋಧನೆ
 
ಏಡಿಗಂತಿಗಳು ಮೈಯಲ್ಲಿ ಏಳುತ್ತಿರುವ ಬಗ್ಗೆ ಅಂಕಿ ಆಂಶ, ಹರಡುವ ರೀತಿ, ರೋಗಚಿಕಿತ್ಸೆಯ ಅನುಭವ, ಪ್ರಾಣಿಗಳ ಮೇಲಿನ ಪ್ರಯೋಗ ಇವೆಲ್ಲ ಏಡಿಗಂತಿಯ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತಿವೆ. ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಮೇಲೆ ಮೂಲ ಸಂಶೋಧನೆ ನಡೆಸಿ ಅದರಲ್ಲಿ ಅನುಕೂಲವಾಗಿ ಕಂಡುದನ್ನು ರೋಗಿಗೆ ಕೊಟ್ಟು ಪರಿಶೀಲಿಸುತ್ತಾರೆ. ಅಂತಿಮಗುರಿ ಏಡಿಗಂತಿ ರೋಗಿಯೇ. ಆಸ್ಪತ್ರೆಗಳ ಒಳ-ಹೊರ ರೋಗಿಗಳ ಚಿಕಿತ್ಸಾಲಯದಲ್ಲೂ ತಜ್ಞರ ಸಲಹೆಯ ಕೋಣೆಗಳಲ್ಲೂ ನಡೆವ ನಿತ್ಯದ ರೋಗಿ ಪರೀಕ್ಷೆ, ಚಿಕಿತ್ಸೆಗಳಿಂದ ಇದು ಕೈಗೂಡುತ್ತದೆ.
ಮೂಲಗುಣ : ಸಾಮಾನ್ಯವಾದವಕ್ಕಿಂತ ಏಡಿಗಂತಿಯ ಜೀವಕಣಗಳಲ್ಲಿ ಜೀವವಸ್ತುಕರಣ (ಮೆಟಬಾಲಿಸಂ) ಬಲು ಹೆಚ್ಚು. ಇದನ್ನೂ ಪುನರುತ್ಪತ್ತಿಯನ್ನೂ (ರಿಪ್ರೊಡಕ್ಷನ್) ಹತೋಟಿಯಲ್ಲಿಡುವ ಕ್ರೊಮೋಸೋಮಲ್ ಜೀನುಗಳ ಮತ್ತು ಕಿಣ್ವಗಳ ಬಲು ಗಹನವಾದ ನಾಜೂಕಿನ ಹೊಂದಾಣಿಕೆಯ ಹತೋಟಿ ವ್ಯವಸ್ಥೆಗೆ ಏಡಿಗಂತಿಯಿಂದ ಎಷ್ಟೋ ಬಗೆಗಳ ಧಕ್ಕೆ ಬರಬಹುದು. ಇದರಿಂದ ಸ್ಥಿರವಾದ ಮಾರ್ಪಾಡೋ ಜೀನುಗಳಲ್ಲಿ ವ್ಯತ್ಯಯವೋ (ಮ್ಯುಟೇಷನ್) ಆಗಬಹುದು. ಈ ವ್ಯತ್ಯಯ ಸಾಕಷ್ಟಿದ್ದರೆ ಜೀವಕಣ ಸಾಯುತ್ತದೆ. ಧಕ್ಕೆ ಜೀವಾಣು ಸ್ಥಿರವಾಗಿ ಜೀವಾಣು ಭಾಜ್ಯತೆಯನ್ನು (ಮೈಟೋಟಿಕ್ ರೇಟ್) ವೇಗಗೊಳಿಸಿದರೆ ಏಳುವುದೇ ಏಡಿಗಂತಿ.
ಸಹಜವಾದ ಎಂದಿನ ಹತೋಟಿ ವ್ಯವಸ್ಥೆಗೆ ಧಕ್ಕೆ ತರುವ ತಿಳಿವಳಿಕೆಯು ಏಡಿಗಂತಿಜನನ (ಕಾರ್ಸಿನೋಜನಿಸಿಸ್) ಮತ್ತು ಹತೋಟಿಗಳ ಬಗ್ಗೆ ಸಂಶೋಧಿಸಲು ಮಹಾ ಅಸ್ತ್ರ. ಗಡಿಯಾರದ ವೇಗವನ್ನು ಹೆಚ್ಚು ಕಡಿಮೆ ಮಾಡುವಂತೆಯೇ ಜೀವಾಣು ಭಾಜ್ಯತೆಯ ವೇಗವನ್ನೂ ಏಡಿಗಂತಿಜನಕಗಳಿಂದ (ಕಾರ್ಸಿನೋಜನ್ಸ್) ಏರಿಸಬಹುದು; ವಿಕಿರಣತೆ (ರೇಡಿಯೇಷನ್), ಕಾಲ್ಚಿಸಿನುಗಳಿಂದ ನಿಧಾನಗೊಳಿಸಬಹುದು. ಒಂದೊಂದು ಜೀವಾಣವೂ 16 ಬಾರಿ ಗುಣಿತವಾದಾಗ 60,000 ಮರಿ ಜೀವಕಣಗಳು ಹುಟ್ಟುವುದರಿಂದ, ಜೀವಾಣು ಭಾಜ್ಯತೆಯ ವೇಗ ತಾಳಗತಿಗಳು ಸ್ವಲ್ಪ ಹೆಚ್ಚಿದರೂ ಬಲುಬೇಗನೆ ಏಡಿಗಂತಿ ಏಳುವುದು ಸುಸ್ಪಷ್ಟ.

ಏಡಿಗಂತಿ ಹುಟ್ಟು : ಎಡೆಬಿಡದೆ ಉರಿಯುತ್ತಿರುವ ಬೆಂಕಿ ಏಡಿಗಂತಿ. ಕಿಚ್ಚೆಬ್ಬಿಸುವ ವಿಧಾನಗಳು ಎಷ್ಟೋ ಇವೆ. ಅಂತೆಯೇ ಏಡಿಗಂತಿಜನಕಗಳಲ್ಲಿ ಕೆಲವು ಭೌತಿಕವಾದರೆ, ಕೆಲವು ರಾಸಾಯನಿಕವಾಗಿವೆ; ಮತ್ತೆ ಕೆಲವು ಮೈ ಒಳಗಿನವು ಇಲ್ಲವೇ ಹೊರಗಿನವು. ಅಂಗಾಂಗಗಳಲ್ಲಿ ಬಗೆಬಗೆಯ ಏಡಿಗಂತಿಗಳಾಗುವುದಕ್ಕೆ ಹಲವು ವಿಧಾನಗಳಿವೆ : 1. ಜನಕಾಂಶಗಳು (ಜನೆಟಿಕ್ ಫ್ಯಾಕ್ಟರ್ಸ್), 2. ರಾಸಾಯನಿಕಕಾರಕಗಳು (ಏಜೆಂಟ್ಸ್), 3. ಭೌತಿಕಕಾರಕಗಳು, 4. ವೈರಸುಗಳು, 5. ಚೋದನಿಕಗಳು (ಹಾರ್ಮೋನ್ಸ್), 6. ಸಂಪ್ರದಾಯ, ರೂಢಿ, ಪದ್ಧತಿಗಳು, ಚಟಗಳು. 7. ಭೂಗುಣ, ಹವಗಳು, 8. ಉಳಿದ ಕಾರಣಗಳು.

1 ಜನಕಾಂಶಗಳು : ಏಡಿಗಂತಿ ಆಗುವುದನ್ನೂ ಆಗದ್ದನ್ನೂ ಪ್ರಯೋಗ ಪ್ರಾಣಿಗಳ ತಳಿ ಎಬ್ಬಿಸುವುದರಲ್ಲಿ ತೋರಿಸುವುದು ಸುಲಭ. ಕೆಲವು ವಂಶಗಳ ಜನರಲ್ಲೂ ಕಣ್ಣಾಲನನೆಗಂತಿ (ರೆಟೀನೊಬ್ಲಾಸ್ಟೋಮ) ಬಹುನರತಂತುಗಳು (ಮಲ್ಟಿಪ್ಲ್ ನ್ಯೂರೋಬ್ಲಾಸ್ಟೋಸಿಸ್) ಇತ್ಯಾದಿ ಏಡಿಗಂತಿಗಳು ನಾಲ್ಕು ತಲೆಮಾರುಗಳ ತನಕವೂ ಮರುಕಳಿಸಿರುವುದು ರುಜುವಾತಾಗಿದೆ. ಮಿಗಿಲಾಗಿ ಬೇರೂರಿದ ಬಿಳಿಕಣರಕ್ತದಲ್ಲಿ (ಕ್ರಾನಿಕ್ ಲುಕೇಮಿಯ) ದೊರೆತಿರುವ ಫಿಲಡೆಲ್ಫಿ ಕ್ರೋಮೋಸೋಮ್ ಏಡಿಗಂತಿ ಕೆಲವು ವಂಶಗಳಲ್ಲಿ ಬರುವುದನ್ನು ತೋರಿಸುತ್ತದೆ.

2 ರಾಸಾಯನಿಕಗಳು : (ನೋಡಿ- ಏಡಿಗಂತಿಜನಕ-ರಾಸಾಯನಿಕಗಳು)

3 ಭೌತಿಕ ಕಾರಕಗಳು : ವಿಕಿರಣಶಕ್ತಿ (ರೇಡಿಯೋಆಕ್ಟಿವ್) ಕೋಬಾಲ್ಟ್ ಆರ್ಸಿನೈಡ್ ಅದುರನ್ನು ತೆಗೆವ ಜರ್ಮನಿಯ ಗಣಿ ಕೆಲಸಗಾರರಲ್ಲಿ ಪುಪ್ಪುಸದ ಗಂತಿಗಳಾದುದು 1926ರಲ್ಲಿ ಖಚಿತವಾಯಿತು. ಅಮೆರಿಕದ ಗಡಿಯಾರದ ಕಾರ್ಖಾನೆಗಳಲ್ಲಿ, ಕತ್ತಲಲ್ಲಿ ಮಿನುಗುವ ರೇಡಿಯಂ ಬಣ್ಣ ಹಚ್ಚುವ ಕುಂಚಗಳನ್ನು ಬಾಯಿಯಿಂದ ಒದ್ದೆಮಾಡುತ್ತಿದ್ದ ಹೆಣ್ಣಾಳುಗಳ ರಕ್ತಜನಕ ಮೂಳೆಗಳಲ್ಲಿ ಗಂತಿ ಬೆಳೆದು ಮಾರಕ ರಕ್ತಕೊರೆಗೆ ಈಡಾದರು. ಈ ಬಗ್ಗೆ ಮುನ್ನೆಚ್ಚರಿಕೆ ಪಡೆದ ಯೂರೋಪಿನ ಕೆಲಸಗಾರರು ಇದೇ ಕಂಟಕದಿಂದ ಪಾರಾದರು. ಮೊದಮೊದಲಿಗೆ ಎಕ್ಸ್ ಕಿರಣಗಳೊಂದಿಗೆ ಕೆಲಸಮಾಡುತ್ತಿದ್ದವರಿಗೆ ಕೈಚರ್ಮದ ಗಂತಿ ಏಳುತ್ತಿತ್ತು. ಹಿರೋಷಿಮಾ ನಾಗಸಾಕಿಗಳಲ್ಲಿ ಪರಮಾಣು ಬಾಂಬ್ ಸಿಡಿದಮೇಲೆ ಅಳಿದುಳಿದವರಲ್ಲಿ ಬಿಳಿಕಣರಕ್ತತೆಯೂ ವಿಕಿರಣಚೋದಿತ ಗಂತಿಗಳೂ ಸಾಮಾನ್ಯರಿಗಿಂತ ಹತ್ತರಷ್ಟು ಹೆಚ್ಚಾಗಿತ್ತು. ಬಿಸಿಲಿಗೆ ವಿಪರೀತ ಮೈಯೊಡ್ಡುವುದು ಚರ್ಮಗಂತಿಗೆ ಕಾರಣವಾಗಬಹುದು. ಕಡಿಮೆ ತರಂಗಮಾನದ ಅತಿನೇರಳೆ ಕಿರಣಗಳು ಮಿತಿಮೀರಿದರೆ ಚರ್ಮಕ್ಕೆ ಹಾನಿಕರ.

4 ವೈರಸುಗಳು : ಎಲೆಕ್ಟ್ರಾನ್ ಸೂಕ್ಷ್ಮದರ್ಶಕಕ್ಕೆ ಮಾತ್ರ ನಿಲುಕುವ ವೈರಸುಗಳು ಜೀವಕಣದಲ್ಲಿ ಹೆಗ್ಗುಣಿತವಾಗಿ ಮರಿ ಜೀವಕಣಗಳ ಒಳಹೊಗಬಲ್ಲುವು. ಕೋಳಿ, ಕಪ್ಪೆ, ಮೊಲ ಮುಂತಾದ ಪ್ರಯೋಗದ ಪ್ರಾಣಿಗಳಲ್ಲಿ ಇವುಗಳಿಂದ ಏಡಿಗಂತಿ ಏಳುವುದು ಖಚಿತವಾಗಿದೆ. ಮಾನವರಲ್ಲೂ ವೈರಸ್ಸುಗಳಿಂದ ನರೋಲಿ (ವಾರ್ಟ್) ಆಗುವುದು ನಿಶ್ಚಿತ.

5 ಚೋದನಿಕಗಳು : ಬಗೆಬಗೆಯ ಅದರಲ್ಲೂ, ಲೈಂಗಿಕ ಚೋದನಿಕಗಳು ಪ್ರಾಣಿಗಳಲ್ಲಿ ಗಂತಿಯನ್ನು ಚೋದಿಸಬಲ್ಲವು. ಪಿಟ್ಯುಟರಿ ಗ್ರಂಥಿಯ ಚೋದನಿಕಗಳು ಬೆಳವಣಿಗೆಯನ್ನೂ ಅಂಗಕೆಲಸಗಳನ್ನೂ ನಿಯಂತ್ರಿಸುವ, ನಾಲ್ಕು ಅಂಗಗಳಲ್ಲೇ (ಮೊಲೆ, ಗರ್ಭಕೋಶ, ಅಂಡಾಶಯ, ಪ್ರೋಸ್ಟೇಟ್) ದೇಹದ ಒಟ್ಟು ಏಡಿಗಂತಿಗಳಲ್ಲಿ 25% ರಷ್ಟು ತೋರುತ್ತವೆ. ಮೊಲೆಯ, ಪ್ರೋಸ್ಟೇಟಿನ ಗಂತಿಗಳು ಅಂಡಾಶಯವನ್ನೋ ಅಥವಾ ತರಡನ್ನೋ ತೆಗೆದರೆ ಕಂಡಹಾಗೇ ತಗ್ಗುತ್ತವೆ.

6 ಸಂಪ್ರದಾಯ, ರೂಢಿ, ಪದ್ಧತಿಗಳು, ಚಟಗಳು : ಎಳೆಗೂಸಾಗಿರುವಾಗಲೇ ಶಿಶ್ನದ ಮುಂದೊಗಲನ್ನು ಕತ್ತರಿಸುವ ಮುಸ್ಲಿಮರು ಯೆಹೂದಿಯರಲ್ಲಿ ಶಿಶ್ನದ ಏಡಿಗಂತಿ ಅತಿವಿರಳ. ಹಾಗೆ ಕತ್ತರಿಸದಿರುವ ಹಿಂದೂಗಳಲ್ಲಿ ಹೆಚ್ಚು. ಇದರೊಂದಿಗೇ ಗರ್ಭಗೊರಳಿನ (ಸರ್ವಿಕ್) ಏಡಿಗಂತಿ ಯೆಹೂದಿ, ಮುಸ್ಲಿಂ ಹೆಂಗಸರಲ್ಲಿ ಅತಿ ವಿರಳ. ಹಿಂದೂ ಹೆಂಗಸರಲ್ಲಿ ಹೆಚ್ಚು. ಶಿಶ್ನದ ಮುಂದೊಗಲಡಿಯಲ್ಲಿ ಸೇರುವ ಕೊಳಕು, ಶಿಶ್ನದ ಹಾಗೂ ಗರ್ಭಗೊರಳಿನ ಏಡಿಗಂತಿಗಳಿಗೆ ಕಾರಣವೆಂಬ ಬಲವಾದ ಶಂಕೆಯಿದೆ. ಬಾಲ್ಯ ಮದುವೆಯಾಗಿ ಹೆರಿಗೆಗಳು ಹೆಚ್ಚಾದಷ್ಟೂ ಮುಂದೊಗಲಲ್ಲಿ ಕೊಳೆ ಸೇರಿದಷ್ಟೂ ಇವು ಆಗುವ ಸಂಭವ ಹೆಚ್ಚು.
ಕಾಶ್ಮೀರಿಗಳು ಕಲ್ಲಿದ್ದಲಿನ ಉರಿಕೆಂಡಗಳಿರುವ ಬಿಸಿಬುಟ್ಟಿಯನ್ನು (ಕಾಂಗ್ರಿ) ಹೊಟ್ಟೆ ತೊಡೆಗಳ ಮೇಲೆ ಧರಿಸುವುದರಿಂದ ಅಲ್ಲೆಲ್ಲ ಚರ್ಮ ಬೆಂದು ಏಡಿಗಂತಿಯಾಗುವುದು ಸಾಮಾನ್ಯ. ಪ್ರಪಂಚದಲ್ಲಿ ಬೇರೆ ಯಾರೂ ಈ ಪದ್ಧತಿಯನ್ನೂ ಅನುಸರಿಸುವುದಿಲ್ಲ. ಆದ್ದರಿಂದ ಬೇರೆಲ್ಲೂ ಈ ಕಾಂಗ್ರಿ ಏಡಿಗಂತಿ ಕಾಣದು.

ಹೊಗೆಸೇದಿಕೆ : ದಿನವೂ ಬಹಳವಾಗಿ ಸೇದುವ ಸಿಗರೇಟುಗಳ ಸಂಖ್ಯೆ, ಸೇದುವ ಅವಧಿಗಳಿಗೆ ತಕ್ಕಂತೆ ಪುಪ್ಪುಸ ಗಂತಿಯ ಕಂಟಕ ಹೆಚ್ಚುತ್ತದೆ. ಸೇದದವರಿಗಿಂತ 20%-30% ರಷ್ಟು ಹೆಚ್ಚು. ಇಷ್ಟಲ್ಲದೆ ಧೂಮಪಾನಿಗಳಲ್ಲಿ ದನಿನಾಳ, ಬಾಯಿ, ಅನ್ನನಾಳ, ಮೂತ್ರಕೋಶದ ಗಂತಿಗಳಾಗುವ ಗಂಡಾಂತರ ಹೆಚ್ಚು. ದಶಲಕ್ಷ ಜನರಲ್ಲಿ ಅಮೆರಿಕದ ಗಂತಿಸಂಸ್ಥೆ ನಡೆಸಿದ ಶೋಧನೆಯಿಂದ ಈ ನಿಜಾಂಶಗಳು ತಿಳಿದುಬಂದಿವೆ. ಬೀಡಿ ಸೇದುವ, ತಂಬಾಕು ಮೆಲ್ಲುವ ಗುಜರಾತಿಗಳಲ್ಲಿ ನಾಲಗೆಬುಡ, ಮೆಂಡಿಕೆಗಳ (ಟಾನ್ಸಿಲ್) ಏಡಿಗಂತಿ ಸಾಮಾನ್ಯ.
ಉರಿವ ತುದಿಯನ್ನು ಬಾಯೊಳಗಿಟ್ಟುಕೊಂಡು ಚುಟ್ಟ ಸೇದುವ ರೂಢಿ ಆಂಧ್ರ ಪ್ರದೇಶದಲ್ಲಿದೆ. ಬಿಸಿ ಹೊಗೆ ಬಡಿಯುವ ಬಾಯಿಯ ಗಡುಸು ಅಂಗುಳದಲ್ಲಿ (ಹಾರ್ಡ್ ಪ್ಯಾಲೆಟ್) ಏಡಿಗಂತಿ ಹೆಚ್ಚು. ಒಂದೇ ಸಮನೆ ತಾಕುವ ಕಾವೂ ತಂಬಾಕಿನ ಹೊಗೆಯೂ ಈ ಆಂಧ್ರ ಏಡಿಗಂತಿಗೆ ಮುಖ್ಯ ಕಾರಣಗಳು.

ತಾಂಬೂಲ : ಭಾರತದಲ್ಲಿ ಎಲ್ಲೆಲ್ಲೂ ತಾಂಬೂಲ ಮೆಲ್ಲುವುದು ಸಾಮಾನ್ಯ ಪದ್ಧತಿ. ಅಡಕೆಯಲ್ಲಿ ಒಗರು ಕೊಡುವ ಟ್ಯಾನಿನ್ ಅಲ್ಲದೆ, ಕನಿಷ್ಠ ಪಕ್ಷ ಆರು ಆಲ್ಕಲಾಯ್ಡುಗಳಿವೆ. ತಾಂಬೂಲದಲ್ಲಿ ವೀಳೆಯದೆಲೆ, ಅಡಕೆ, ಸುಣ್ಣ, ಶುಂಠಿ, ತಂಬಾಕು, ಮೆಣಸು ಮತ್ತಿತರ ಪದಾರ್ಥಗಳನ್ನು ಸೇರಿಸುವುದುಂಟು. ಮದ್ರಾಸಿನ ಒಟ್ಟು ಏಡಿಗಂತಿಗಳಲ್ಲಿ 34% ಪಾಲು ಬಾಯಿಗಂತಿಗೆ ಬಹು ಹೆಚ್ಚಾಗಿ ವೀಳ್ಯ, ಅಡಕೆಗಳೊಂದಿಗೆ ತಂಬಾಕು ಅಗಿಯುತ್ತ ಬಾಯಲ್ಲಿ ಒಂದೆಡೆಗೆ ಒತ್ತಲಿಸುವುದು ಕಾರಣ ಎಂದು ನುರಿತವರ ಅಭಿಮತ. ಖೈನಿ ಎಂಬ ತಂಬಾಕು ಸುಣ್ಣಗಳನ್ನು ತಾಂಬೂಲದಲ್ಲಿ ಗಂಟೆಗಟ್ಟಲೆ ದವಡೆಯಲ್ಲಿಟ್ಟುಕೊಂಡು ಮೆಲ್ಲುವ ಬಿಹಾರ, ಉತ್ತರ ಪ್ರದೇಶದ ಜನರಲ್ಲಿ ಬಾಯಿ, ಅನ್ನನಾಳಗಳ ಏಡಿಗಂತಿ, ತಾಂಬೂಲ ಹಾಕದವರಿಗಿಂತ ಎಂಟರಷ್ಟು ಹೆಚ್ಚು. ಬಾಯಿಯ ದುರ್ಗಂಧ, ಹಲ್ಲುಗಳ ರೋಗ, ಅನ್ನಾಂಗಗಳ ಕೊರೆ ಸಹಾಯಕ ಕಾರಣಗಳಿರಬಹುದು.

ಧೋತಿ ಗಂತಿ : ಧೋತಿ ಅಥವಾ ಪಂಚೆಯನ್ನು ಸೊಂಟದ ಸುತ್ತ ಬಿಗಿಯಾಗಿ ಕಟ್ಟಿ ಇನ್ನೊಂದು ತುದಿಯನ್ನು ತೊಡೆ ಸಂದಿನಲ್ಲಿ ತೂರಿಸಿ ಸೊಂಟದ ಹಿಂಭಾಗದಲ್ಲಿ ಬಿಗಿಸುತ್ತಾರೆ. ಸೊಂಟ ಮೂಳೆ ಮೇಲೂ ತೊಡೆಸಂದುಗಳಲ್ಲೂ ಚರ್ಮದ ಒತ್ತು ಹುಣ್ಣಾಗಿ (ಪ್ರೆಷರ್ ಸೋರ್) ಏಡಿಗಂತಿಯಾಗುವುದು ಹೆಚ್ಚು. ಬಡವರಲ್ಲಿ ಇದು ಸಾಮಾನ್ಯ. ಕೊಳಕುತನವೇ ಈ ಗಂತಿಗೆ ಕಾರಣವಿರಬಹುದು.

7 ಭೂಗುಣ-ಹವಗಳು : ಮೊಲೆಗಂತಿ ಭಾರತ ಜಪಾನುಗಳಲ್ಲಿ ವಿರಳ; ಯೂರೋಪ್, ಉತ್ತರ ಅಮೆರಿಕಗಳಲ್ಲಿ ಹೆಚ್ಚು.. ಜಪಾನಿನಲ್ಲಿ ಜಠರದ ಏಡಿಗಂತಿ ಬಹಳ ಹೆಚ್ಚು; ಉತ್ತರ ಯೂರೋಪ್, ಅಮೆರಿಕಗಳಲ್ಲಿ ಅಧಿಕ, ಭಾರತದಲ್ಲಿ ವಿರಳ. ಚೀನಿಯರಲ್ಲಿ ಮೂಗುಗಂಟಲ್ಕುಳಿಯ (ನೇಸೊಫ್ಯಾರಿಂಕ್ಸ್) ಗಂತಿ ಬಲು ಹೆಚ್ಚು. ಉಷ್ಣವಲಯದ ಬಿಳಿಜನರಲ್ಲಿ ಬಿಸಿಲಿನಿಂದ ಚರ್ಮದ ಏಡಿಗಂತಿ ಆಗುವುದು ಹೆಚ್ಚು. ಚರ್ಮದಲ್ಲಿ ಕರ್ವಣ್ಣ (ಮೆಲನಿನ್) ಹೆಚ್ಚಿದ್ದು ಇದನ್ನು ತಡೆಗಟ್ಟುವ ನೀಗ್ರೋಚರ್ಮಗಳಲ್ಲಿ ಇದು ಅರಿದು.

8 ಉಳಿದ ಕಾರಣಗಳು : ಮದ್ಯಪಾನ ಮಾಡುವವರಲ್ಲಿ ದನಿನಾಳ, ಅನ್ನನಾಳಗಳ ಏಡಿಗಂತಿ ಹೆಚ್ಚು. ಆಫ್ರಿಕದ ಬಂಟುಜನಾಂಗಗಳಲ್ಲಿ ಆಹಾರದ ನ್ಯೂನತೆ ಅಥವಾ ಆಹಾರಾಂಶಗಳಲ್ಲಿ ವಿಷವಸ್ತು (ಉದಾ: ಅಪ್ಲೊಟಾಕ್ಸಿನ್) ಈಲಿಯ ಏಡಿಗಂತಿಗೆ ಕಾರಣ. ಏಡಿಗಂತಿ ರೋಗಿಗಳಲ್ಲಿ ಬೇರೆ ಬಗೆಯ ಗಂತಿ ಏಳುವುದೂ 2-6ರಷ್ಟೂ ಹೆಚ್ಚು. ಮೊಲೆಗಂತಿ ಮದುವೆ ಆಗದವರಿಗಿಂತ ಆದವರಲ್ಲಿ ಕಡಿಮೆ. ಮಕ್ಕಳಿಗೆ ಎದೆಹಾಲು ಕೊಡುವ ತಾಯಂದಿರಲ್ಲಿ ಇನ್ನೂ ಕಡಿಮೆ.

ಏಡಿಗಂತಿಯ ಹೆಗ್ಗುಣಗಳು : ಹತೋಟಿಗೆಟ್ಟಿರುವುದೂ ಜೀವಕಣಗಳ ಹುಟ್ಟುಮರಳಿಕೆಯೂ (ಅನಾಪ್ಲೇಸಿಯ) ಏಡಿಗಂತಿಯ ಮುಖ್ಯ ಗುಣಗಳು. ಸುತ್ತಣ ಅಂಗಾಂಶಗಳು ಒಳನುಗ್ಗುವುದು, ಮರುಕಳಿಕೆ, ಬೇರೆ ಅಂಗಾಂಗಗಳಿಗೆ ಗುಳೆಯ (ಮೆಟಸ್ಟೇಸಿಸ್) ಹೋಗುವುದು, ಜೀವಾಣುವಿನ (ನ್ಯೂಕ್ಲಿಯಸ್) ಮಾರ್ಪಾಟುಗಳು, ಧ್ರುವೀಕರಣದ (ಪೊಲಾರಿಟಿ) ನಾಶ, ಮಾರಕ ಪರಿಣಾಮ, ಈ ಮುಖ್ಯ ಗುಣಗಳಲ್ಲಿ ಬಗೆಬಗೆಯ ಏಡಿಗಂತಿಗಳೂ ತರಾವರಿಯಾಗಿರುತ್ತವೆ.
ಏಡಿಗಂತಿ ಹರಡುವ ವಿಧಾನಗಳಿವು : ಒಳಪಸರಿಕೆ (ಇನ್‍ಫಿಲ್ಟ್ರೇಷನ್) ಹಾಲು ರಸನಾಳಗಳು (ಲಿಂಫ್ಯಾಟಿಕ್ಸ್), ರಕ್ತನಾಳಗಳ ಮೂಲಕ ಅನ್ನನಾಳ, ಕರುಳು, ಮೂತ್ರನಾಳ ಇತ್ಯಾದಿ ಸಹಜ ಅಂಗ ಹೊರದಾರಿಗಳಿಂದ; ಗುಂಡಿಗೆ, ಪುಪ್ಪುಸ, ಪಚನಾಂಗಗಳ ಸುತ್ತಪೊರೆಗಳ ಪೊಳ್ಳಗಳ ಮೂಲಕ; ಚುಚ್ಚಿಳಿತ (ಇನಾಕ್ಯುಲೇಷನ್).
ಮುನ್ನೇಡಿಗಂತಿ (ಪ್ರಿಕ್ಯಾನ್ಸರಸ್‍ಲೀಷನ್) : ಬಾಯಿಯ, ಹೆಣ್ಣಿನ ಜನನಾಂಗದ ಬಿಳಿಮಚ್ಚನೆ (ಲ್ಯೂಕೊಪ್ಲೇಕಿಯ), ಮುಪ್ಪಿನ ಕೊಂಪೊರೆತನ (ಕೆರೆಟೋಸಿಸ್) ಮತ್ತಿತರ ಬೇನೆಗಳಲ್ಲಿ ಗಂತಿಯಾಗುವ ಸಂಭವ ಬಹು ಹೆಚ್ಚು.

ಮೈಯಲ್ಲಿ ಪರಿಣಾಮಗಳು : ತೂಕವಿಳಿದು ನಮೆದು ಜಡತೆಯನ್ನಪ್ಪುವುದು ಹೆಚ್ಚಾಗಿ ಹರಡಿಕೊಂಡ ಏಡಿಗಂತಿಯಲ್ಲಿ ಹೆಚ್ಚು. ಹೀಗಾಗಲು, ಗಂತಿಯ ನಿರ್ದಿಷ್ಟ ಸ್ವಭಾವಕ್ಕಿಂತ-ಹಸಿವಿಲ್ಲದಿರುವಿಕೆ, ರಕ್ತನಷ್ಟ, ಭೇದಿ, ವಾಂತಿ, ಜ್ವರ ಇತ್ಯಾದಿಗಳೇ ಕಾರಣ. ಜೀವವಸ್ತುಕರಣದಲ್ಲಿ ಮೈಕಡಿತ, ರಕ್ತಸಕ್ಕರೆ ತಗ್ಗುವುದು, ಕ್ಯಾಲ್ಸಿಯಂ ಹೆಚ್ಚಳ ಮತ್ತಿತರ ಗೊತ್ತಾದ ಬದಲಾವಣೆಗಳಾಗಬಹುದು.
ರೋಗಿ ಬೇರಾವ ರೋಗಕ್ಕೂ ಏಡಿಗಂತಿಯಷ್ಟೂ ಅಂಜುವುದಿಲ್ಲ. ಏಡಿಗಂತಿ ಚಿಕಿತ್ಸೆ ಚೆನ್ನಾದಷ್ಟೂ ಈ ರೀತಿ ಅಂಜಿಕೆ ಇಳಿಯಬಹುದು. ಏಡಿಗಂತಿಯನ್ನು ಎಳೆಯದರಲ್ಲೇ ಕಂಡುಹಿಡಿವುದೂ ನಿರೋಧಕ ಕ್ರಮಗಳೂ ತಕ್ಕ ಚಿಕಿತ್ಸೆಯೂ ಮುಖ್ಯ.
ಏಡಿಗಂತಿ ಸಂಶೋಧನೆಯ ಅಂತಿಮ ಗುರಿಗಳಿವು : 1. ಸುಧಾರಿತ ಪರೀಕ್ಷಾ ವಿಧಾನಗಳಿಂದ ಗಂತಿಯನ್ನು ಎಳೆತನದಲ್ಲೇ ಪತ್ತೆ ಹಚ್ಚಿ, ಗೊತ್ತಿರುವ ಚಿಕಿತ್ಸಾ ವಿಧಾನಗಳಿಂದ ಹೆಚ್ಚಿನ ಗುಣ ಪಡೆಯುವುದು. 2. ಸುಧಾರಿತ ಚಿಕಿತ್ಸೆಗಳಿಂದ ವಿಳಂಬಿತ ಹಾಗೂ ದುರ್ಲಕ್ಷಿತ ರೋಗಿಗಳು ಸಫಲಗುಣ ಪಡೆಯುವುದು. 3. ಸಫಲ ನಿರೋಧಕ ಕ್ರಮಗಳಿಂದ ರೋಗಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಅನಗತ್ಯಗೊಳಿಸವುದು.

ಎಳೆಯದರ ಶೋಧನೆ : ಇದನ್ನು ಸಾಧಿಸಲು ಅವಶ್ಯಕ್ರಮಗಳು-ಪ್ರಸ್ತುತ ಪರೀಕ್ಷಾಸಾಧನಗಳನ್ನು ಸದುಪಯೋಗಿಸುವುದು ಹಾಗೂ ಪರಿಪೂರ್ಣಗೊಳಿಸುವುದು; ರೋಗಲಕ್ಷಣ ಚಿಹ್ನೆಗಳು ತಲೆದೋರುವ ಮುನ್ನವೇ ತಾಂತ್ರಿಕ ನವ ಸಾಧನಗಳಿಂದ ಏಡಿಗಂತಿಯನ್ನು ಗೊತ್ತುಹಚ್ಚುವುದು.

ಏಡಿಗಂತಿಯ ಎಚ್ಚರಿಕೆಯ ಸಂಕೇತಗಳು; ಬಗೆಬಗೆಗಳ ಏಡಿಗಂತಿಗಳ ರೋಗ ಚಿಹ್ನೆ ಲಕ್ಷಣಗಳು ತರಾವರಿಯಾಗಿದ್ದರು ಕೆಲವು ಸೂಚನೆಗಳನ್ನು ಜನಸಾಮಾನ್ಯರೂ ಗುರುತಿಸಬಹುದು. ಈ ಸಂಕೇತಗಳಿಂದ ಏಡಿಗಂತಿ ರುಜುವಾತಾಗುವುದಿಲ್ಲ; ಆದರೆ ಇವು ರೋಗಿಯನ್ನು ವೈದ್ಯರ ಪರೀಕ್ಷೆ ಸಲಹೆಗಳಿಗೆ ಕರೆತರಬಲ್ಲವು. ಇವು ಸುಳ್ಳೆಂದು ನಿರ್ಧಾರವಾದಾಗ ವ್ಯಕ್ತಿ ನಿಶ್ಚಿಂತನಾಗಬಹುದು. ಸಕಾಲದಲ್ಲಿ ಏಡಿಗಂತಿ ಗೊತ್ತಾದರೆ ತಕ್ಕ ಚಿಕಿತ್ಸೆಯಿಂದ ಪೂರಾ ಗುಣಪಡಿಸಬಹುದು. ಏಡಿಗಂತಿಗಿಂತಲೂ ಅದನ್ನು ಕುರಿತ ಅಂಜಿಕೆ ಹೆಚ್ಚು ಹಾನಿಕರ. ಈ ದಿಗಿಲಿನಿಂದ ವೈದ್ಯಪಟುವಿನ ಸಲಹೆ ಪಡೆಯುವುದು ತಡವಾಗುತ್ತದೆ; ತಡವಾದರೆ ಪೂರ್ತಿ ಗುಣ ಕೈಗೂಡದು. ಎಚ್ಚರಿಕೆಯ ಸಂಕೇತಗಳಿವು : 1. ಗಡ್ಡೆ ಅಥವಾ ಊದು ಕಾಣಿಸಿಕೊಂಡು ಬೆಳೆಯುತ್ತಲೇ ಇರುವುದು. 2. ದೇಹದ ಸಹಜ ಮಾರ್ಗಗಳಿಂದ ಆಮು, ಕಫ, ಮಲ, ಮೂತ್ರ ಇತ್ಯಾದಿಗಳ ಮಿತಿಗೆಟ್ಟ ವಿಸರ್ಜನೆ ಅಥವಾ ರಕ್ತಸ್ರಾವ. 3. ಕಾರಣವಿಲ್ಲದೆ ಒಂದೆಡೆ ಕಾಣಿಸಿಕೊಳ್ಳುವ ಚಿಹ್ನೆ ರೋಗಗಳು (i) ಒಡೆದ ದನಿ, ( ii ) ಎಡೆಬಿಡದ ಕೆಮ್ಮು, ( iii ) ಕಷ್ಟನುಂಗಣೆ, (iv ) ಎಡೆಬಿಡದೆ ಅಜೀರ್ಣ, ( v) ಗೊತ್ತುಗೆಟ್ಟ ಭೇದಿ ಇಲ್ಲವೇ ಮಲಗಟ್ಟು, ( vi ) ಬಾಯಿ, ಚರ್ಮಗಳಲ್ಲಿ ವಾಸಿಯಾಗದ ಹುಣ್ಣು, ( vii ) ಮೊಲೆಯಲ್ಲಿ ನೋವಿಲ್ಲದ ಗಡ್ಡೆ, ( viii ) ಕ್ರಮ ತಪ್ಪಿ ಆಗುವ ಮುಟ್ಟು, ಅನಿರೀಕ್ಷಿತ ರಕ್ತಸ್ರಾವ.
ಎಚ್ಚರಿಕೆ ಸಂಕೇತಗಳ ನಕಾರ (ನೆಗೆಟಿವ್) : ರೋಗಲಕ್ಷಣಗಳು ಹೆಚ್ಚಿರುವುದಕ್ಕಿಂತ ಇವು ತೋರುವುದು ಹೆಚ್ಚು ಹಾನಿಕರ. ಇದು ನೋವಿನ ಬಗ್ಗೆಯಂತೂ ಅಕ್ಷರಶಃ ನಿಜ. ರೋಗಿಗೆ ಇದು ದೈವಪ್ರಸಾದ ಎನಿಸಬಹುದು: ಆದರೆ ಬರಬರುತ್ತ ದುರಂತ ತಪ್ಪುವುದಿಲ್ಲ. ಏಡಿಗಂತಿಯ ಪ್ರಾರಂಭಲಕ್ಷಣ ನೋವೇ ಆಗಿದ್ದರೆ, ಎಳೆಯದರಲ್ಲೇ ಅದನ್ನು ಸುಲಭವಾಗಿ ಗುರುತಿಸಿ ಅಷ್ಟೇ ಸರಾಗವಾಗಿ ಗುಣಪಡಿಸಬಹುದಿತ್ತು.
ಜನರಲ್ಲಿ ತಿಳಿವಳಿಕೆ : ಇಂದಿನ ಪರೀಕ್ಷಾವಿಧಾನಗಳ ಸದುಪಯೋಗಕ್ಕೆ ಮೊಟ್ಟ ಮೊದಲಾಗಿ ಜನರಲ್ಲಿ ಏಡಿಗಂತಿ ವಿಚಾರವಾಗಿ ತಿಳಿವು ಹೆಚ್ಚಿಸಬೇಕು. ಯಾವ ಚಿಕಿತ್ಸೆಗೂ ಜಗ್ಗದ ಸ್ಥಿತಿಯಲ್ಲಿ ಕೈಮೀರಿದ ಮೇಲೆ ರೋಗಿ ವೈದ್ಯಸಲಹೆಗೆ ಬಂದರೆ ಯಾವ ಮಹಾ ವಿಧಾನಗಳೂ ಹಿಡಿಯವು. 35 ವಯಸ್ಸು ದಾಟಿದ ಆರೋಗ್ಯವಂತರು ಒಂದೆರಡು ಬಾರಿಯಾದರೂ ಏಡಿಗಂತಿ ಶೋಧನಾ ಶಿಬಿರಗಳಿಗೆ ಬರಬೇಕು. ಈ ಕೆಲಸ ಸೇವೆಗಳು ಸಾಮಾನ್ಯ ವೈದ್ಯ ಸಂಸ್ಥೆಗಳನ್ನವಲಂಬಿಸದೆ ಶೀಘ್ರಶೋಧನೆ, ಅದರಿಂದಾಗುವ ಸಫಲ ಚಿಕಿತ್ಸೆ ನಡೆಸುವ ರಾಷ್ಟ್ರೀಯ ಏಡಿಗಂತಿ ಸ್ವಯಂಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆಯಬೇಕು.

ಸುಧಾರಿತ ಪರೀಕ್ಷಾ ವಿಧಾನಗಳು : ಏಡಿಗಂತಿಶೋಧನೆ ಕಷ್ಟವಾದಾಗ ಈ ವಿಧಾನಗಳು ಗುಣಕಾರಕ ವೇಗವನ್ನು ಗಮನೀಯವಾಗಿ ಹೆಚ್ಚಿಸಬಲ್ಲವು.
ಸರಳ ಪರೀಕ್ಷೆ. ಗಂತಿ ಬರಿಗಣ್ಣಿನಿಂದ ನೋಡುವಂತಿರುವಾಗ ಅಥವಾ ಮುಟ್ಟಿದರೆ ಗೋಚರವಾಗುವಾಗ ಇದನ್ನು ಮಾಡಬೇಕು.
ರೋಗಿ ಹೇಳಿಕೆಯನ್ನು ಮನವರಿಕೆ ಮಾಡಿಕೊಳ್ಳುವುದು.
ಎಕ್ಸ್ ಕಿರಣ ಪರೀಕ್ಷೆ : ಜನರು ಮುಂದೆ ಬಂದು ಎಕ್ಸ್ ಕಿರಣ ಪರೀಕ್ಷೆಗೆ ಈಡಾಗದಿದ್ದಲ್ಲಿ ಏಡಿಗಂತಿಗಳನ್ನು ಗುರುತಿಸಲು ಸದಾ ಸಾಧ್ಯವಿಲ್ಲ. ಅನೇಕ ಬಾರಿ ಗಂತಿ ಎಕ್ಸ್ ಕಿರಣ ಫಲಕದ ಮೇಲೆ ಎದ್ದು ತೋರಬಹುದು, ನೆರಳು ಬೀಳಿಸಬಹುದು. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಬಳಸಿದರೆ ಚೆನ್ನಾದ ಸಾಧನ.
ವಿಕಿರಣ ಅಪಾರದರ್ಶಕ ರಾಸಾಯನಿಕಗಳು : ಇವನ್ನು ರೋಗಿಗೆ ನುಂಗಿಸಿದರೆ, ಕೆಲವು ಗಂತಿಗಳಿಗೆ ಅಂಟಿಕೊಂಡು ಎಕ್ಸ್ ಕಿರಣ ಚಿತ್ರದಲ್ಲಿ ನೆರಳಾಗಿ ತೋರಬಹುದು. ಇವನ್ನು ಅಂಟಿಸಿಕೊಳ್ಳದ ಗಂತಿಗಳು ಅಪಾರದರ್ಶಕ ಹಿನ್ನೆಲೆಯಲ್ಲಿ ಚೆನ್ನಾಗಿ ಗೋಚರಿಸಬಹುದು.
ಕೆಲವು ವಿಶೇಷ ಎಂಡೊಸ್ಕೋಪುಗಳ ನೆರವಿನಿಂದ ಉಸಿರ್ನಾಳ, ಜಠರ, ಮೂತ್ರಕೋಶ, ಹೆಗ್ಗರುಳು ಮುಂತಾದ ಒಳಾಂಗಗಳಲ್ಲಿನ ಗಂತಿಗಳನ್ನು ಬರಿಗಣ್ಣಿನಿಂದ ನೋಡಬಹುದು. ಜೀವುಂಡಿ (ಬಯಾಪ್ಸಿ) ತೆಗೆದುಕೊಳ್ಳುವುದು. ಶಸ್ತ್ರಕ್ರಿಯೆ ನಡೆಯುತ್ತಿದ್ದಂತೆಯೇ ಅನುಮಾನಿತ ಗಡ್ಡೆಯಿಂದ ಕೊಯ್ತೆಗೆದ ಚೂರನ್ನು (ಜೀವುಂಡಿಗೆ) ಕೂಡಲೇ ನೀರ್ಗಲ್ಲಾಗಿಸಿ ಗಡಸುಗಟ್ಟಿಸಿ, ನೀರ್ಗಲ್ಲಾಗಿಸುವ ಚಿಕ್ಕ ಕತ್ತರಿಯಿಂದ ಕತ್ತರಿಸಿ, ಸೂಕ್ಷ್ಮದರ್ಶಕದಡಿಯಲ್ಲಿ ಪರೀಕ್ಷಿಸಬೇಕು. ಈ ವಿಧಾನದಿಂದ ಗಂತಿಯ ಇರವು, ರೋಗದ ಬಗೆ-ಇವನ್ನು ಕೆಲಕ್ಷಣಗಳಲ್ಲೇ ತಿಳಿದು ಮುಂದಿನ ತಕ್ಕ ಚಿಕಿತ್ಸೆಯನ್ನು ಖಚಿತವಾಗಿ ನಿರ್ಧರಿಸಬಹುದು. ಇದರಿಂದ ಮತ್ತೊಂದು ಬಾರಿ ಶಸ್ತ್ರಕ್ರಿಯೆಗೊಳಗಾಗುವ ತೊಂದರೆ ತಪ್ಪುತ್ತದೆ. ಬಹುಬೇಗ ಮಾಡುವ ಈ ಏರ್ಪಾಡಿನಿಂದ ಜೀವುಂಡಿಗೆಯ ಊರಿಗೆ (ಫಿಕ್ಸೇಷನ್) ಬಣ್ಣವೇರಿಸಿಕೆ (ಸ್ಟೆಯ್ನಿಂಗ್) ಇನ್ನೂ ಚೆನ್ನಾಗಬೇಕು.
ಪದರ ಜೀವಾಣುಶಾಸ್ತ್ರ (ಎಕ್ಸ್ ಪೋಲಿಯೇಟಿವ್ ಸೈಟಾಲಜಿ) : ಸಾಮಾನ್ಯವಾಗಿ ಏಡಿಗಂತಿಯ ಜೀವಕಣಗಳು ಒಂದಕ್ಕೊಂದು ಅಂಟಿಕೊಳ್ಳುವ ಬಲ ಕಡಿಮೆ, ಬೆಳೆತದ ಮೇಲ್ಮೈ ತೊಳೆತದ ದ್ರವ್ಯದಲ್ಲಿ ಅಥವಾ ಅಂಗದ ರಸದಲ್ಲಿ ಪೊರೆಪೊರೆಯಾಗಿ ಎದ್ದುಬರುವ ಗಂತಿಕಣಗಳನ್ನು ಗುರುತಿಸುವ ವಿಧಾನವೇ ಪದರ ಜೀವಾಣುಶಾಸ್ತ್ರ.
ಎಳ್ಳಷ್ಟೂ ರೋಗಲಕ್ಷಣಗಳಿರದ ಹೆಂಗಸರ ಯೋನಿಸುರಿತದಲ್ಲಿ ಕಂಡುಬರುವ ಗಂತಿಜೀವಕಣಗಳನ್ನು ಪೆಪ್ ಲೇಪ ಶೋಧನೆ (ಪೆಪ್ ಸ್ಮಿಯರ್ ಟೆಸ್ಟ್) ಎಂದು ಜನಪ್ರಿಯವಾಗಿ ಹೆಸರಾದ ಪೆಪನಿಕೋಲನ ವಿಧಾನದಿಂದ ಸೂಕ್ಷ್ಮದರ್ಶಕದಡಿಯಲ್ಲಿ ಪರೀಕ್ಷಿಸಿ ಎಳೆಯದರಲ್ಲೇ ಗೊರಳಿನ ಏಡಿಗಂತಿಯನ್ನು ಗೊತ್ತುಹಚ್ಚಬಹುದು. ಈ ವಿಧಾನ ಜನತಂಡದ ಪರೀಕ್ಷೆಗೆ ಬಳಸುವಷ್ಟು ಸರಳವೂ ಚುರುಕಾದುದೂ ಆಗಿದೆ.
ಗಂತಿಕಣಗಳ ಪರೀಕ್ಷೆಯಿಂದ ಅನೇಕ ಅಂಗಗಳ ಏಡಿಗಂತಿಗಳನ್ನು ಗೊತ್ತು ಹಚ್ಚಬಹುದು-ದನಿನಾಳ (ಕಫ), ಪುಪ್ಪುಸ (ಉಗುಳು, ಉಸಿರ್ನಾಳದ ತೊಳೆತಗಳು), ಮೂತ್ರಪಿಂಡ, ಮೂತ್ರಕೋಶ (ಮೂತ್ರ), ಜಠರ ಕರುಳು (ಉಪ್ಪುನೀರಿನ ತೊಳೆತಗಳು), ಪಿತ್ತನಾಳ (ದುರಾರ್ಗರುಳಿನ ತೊಳೆಗಳು) ಮತ್ತು ಮೊಲೆಯಿಂದ ಬರುವ ಸುರಿಕೆ, ಇಷ್ಟಲ್ಲದೆ ಮಿದುಳು, ಬೆನ್ನುಹುರಿಯ ದ್ರವ (ಸೆರಿಬ್ರೊಸ್ಮೈನಲ್ ಫ್ಲೂಯಿಡ್), ಸುತ್ತಂಚಿನ (ಪೆರಿಫೆರಲ್) ರಕ್ತದಲ್ಲಿ ಪೊರೆಯ ಚೀಲ, ಪೊಳ್ಳುಗಳಲ್ಲಿನ (ಪುಪ್ಪುಸ, ಗುಂಡಿಗೆ ಪಚನಾಂಗಗಳ ಸುತ್ತ ಪೊರೆ, ಕೀಲುಗಳ) ಕವಚ ದ್ರವ್ಯಗಳಲ್ಲಿ ಹಲವಾರು ಸಲ ಗಂತಿಕಣಗಳನ್ನು ಗುರುತಿಸಬಹುದು. ಎಷ್ಟಾದರೂ ಇದಕ್ಕೆಲ್ಲ ರೋಗಿಯನ್ನು ವಿವಿಧ ಗಂತಿಗಳಿಗೆ ಸಿದ್ಧಗೊಳಿಸುವುದು, ಗಂತಿಕಣಗಳು ಕೆಡುವ ಮುನ್ನವೇ ಪರೀಕ್ಷಕ ಪದಾರ್ಥಗಳನ್ನು ಸೇರಿಸಿ ಅಣಿಗೊಳಿಸುವುದು, ಅತಿ ಜಾಗೃತ ಕೌಶಲದಿಂದ ಅನೇಕ ಲೇಪಗಳನ್ನು ಮೊಟಕಾದ ಪರೀಕ್ಷೆ, ಗಂಟೆಗಟ್ಟಲೆ ತಜ್ಞರ ಕಾಲಾವಧಿ ಹಾಗೂ ಪರಿಶ್ರಮ ಬೇಕೇ ಬೇಕು. ಖಚಿತತೆಯನ್ನು ಬಲಿಗೊಡದೆ ಈ ತ್ರಾಸಕರ ಕ್ರಿಯಾವಿಧಾನವನ್ನು ಸರಳಗೊಳಿಸಬೇಕಾಗಿದೆ.

ಜೀವವಿದ್ಯುನ್ಮಾಪಕ (ಬಯೋ ಎಲೆಕ್ಟ್ರೊಮೀಟರ್) : ಏಡಿಗಂತಿ ಮತ್ತಿತರ ರೋಗಗಳನ್ನು ಗುರುತಿಸುವ ಈ ಮಾಪಕಕ್ಕೆ ದೇಹದ ಜೀವವಿದ್ಯುತ್ತೇ ಆಧಾರ. ಈ ಉಪಕರಣದಿಂದ ಎಡಬಲದ ವಿದ್ಯುತ್ ವಿಭವ ವ್ಯತ್ಯಾಸಗಳನ್ನು (ಪೊಟೆನ್‍ಷಿಯಲ್ ಡಿಫರೆನ್ಸ್) ಅಳೆಯಬಹುದು. ಬೆರಳಿಗೆ ತಾಕಿರುವ ವೋಲ್ಟ್ ಮಾಪಿಯು ವಿದ್ಯುನ್ಮಂಡಲಕ್ಕೆ ಹೊಂದಿಕೊಂಡಿರುತ್ತದೆ.
ಚರ್ಮದ ವಿದ್ಯುದ್ವಾಹಕತೆ (ಕಂಡಕ್ಟಿವಿಟಿ) ಮತ್ತು ಏರುಸಿರಾಟಕ್ಕೆ (ಹೈಪರ್ ವೆಂಟಿಲೇಷನ್) ಈ ಮಾಪಕದ ಅಳತೆಗಳು, ಏಡಿಗಂತಿ ಮತ್ತಿತರ ವ್ಯಾಧಿಗಳನ್ನಷ್ಟೇ ಅಲ್ಲದೆ, ಎಲ್ಲಕ್ಕಿಂತ ಹೆಚ್ಚು ರೋಗಲಕ್ಷಣಗಳ ಸುಳಿವಿಲ್ಲದಿದ್ದರೂ ಏಡಿಗಂತಿಗಾಗುವ ಸಂಭವವನ್ನು ಗೊತ್ತುಹಚ್ಚುತ್ತವೆ.

192 ಏಡಿಗಂತಿ ರೋಗಿಗಳಲ್ಲಿ 40% ಮಾತ್ರ ವೆಚ್ಚದ ಪೆಪ್ ಲೇಪ ಶೋಧನೆ ಅಗತ್ಯ. ಮಿಕ್ಕ 60%ಕ್ಕೆ ಬೇಕಿಲ್ಲವೆಂದು ಈ ಮಾಪಕದಿಂದ ಮಾರ್ಟನ್ ವಿಟ್‍ಬಿ ಸಾಧಿಸಿದ್ದಾನೆ. ಅಂದರೆ ಇದು ಸರ್ಕಾರಕ್ಕೆ ಪ್ರತಿ ಲಕ್ಷ ಜನರ ಪರೀಕ್ಷೆಗೆ 20 ಲಕ್ಷ ರೂಪಾಯಿಗಳಷ್ಟು ಉಳಿಸುತ್ತದೆ.

ನಿರೋಧಕ ಕ್ರಮಗಳು : ಏಡಿಗಂತಿಯ ಭೌಗೋಳಿಕತೆ, ಹವ, ಅಪಾಯಕರ ಕಸುಬುಗಳ ಸ್ಥಿತಿಗತಿಗಳು, ರೂಢಿ ಸಂಪ್ರದಾಯಗಳು, ಚಟಗಳು, ಹರವು ಇತ್ಯಾದಿಗಳ ಅಂಕಿಅಂಶಗಳ ಶೋಧನೆ ಏಡಿಗಂತಿ ನಿವಾರಣೆಗೆ ಮಹಾಕೊಡುಗೆಗಳು. ಪರಿಸರ ಹಾಗೂ ಮೈಯಲ್ಲಿನ ಗಂತಿಕಾರಕಗಳನ್ನು ಹೆಚ್ಚುಹೆಚ್ಚಾಗಿ ಗುರುತಿಸಿ ಮುಕ್ಕಾಲು ಭಾಗದಷ್ಟು ಗಂತಿಗಳನ್ನು ತಡೆಗಟ್ಟಲು ಸಾಧ್ಯವಾಗಿದೆ.

ಕೈಗಾರಿಕೆಯಲ್ಲಿನ ವಿವಿಧ ಹಂತಗಳಲ್ಲಿ ಅನೇಕ ವಸ್ತುಗಳಿಂದ ಗಂತಿ ಹೇಳಬಹುದು.-ವಿಕಿರಣಶಕ್ತಿ ಅದುರಿನಲ್ಲಿ, ಬಣ್ಣವಸ್ತುಗಳ ತಯಾರಿಕೆಯಲ್ಲಿ, ಕ್ರೋಮಿಯಂ ತಯಾರಿಕೆಯ ಉತ್ಪನ್ನಗಳಲ್ಲಿ, ಎಕ್ಸ್ ಕಿರಣ ಕೊಳವೆಗಳಿಂದ, ಹರಿದಳ, ಕಲ್ನಾರುಗಳಲ್ಲಿ ಅದುರಿನಿಂದ ಬಳಕೆಯ ರೂಪದ ತನಕ-ಇತ್ಯಾದಿ ಸರಿಯಾದ ನಿವಾರಣೋಪಾಯಗಳು ಏಡಿಗಂತಿಯಾಗುವುದನ್ನು ತಪ್ಪಿಸುತ್ತವೆ. ಈ ಕ್ರಮಗಳಿಂದ ವಸ್ತುಗಳ ಬಣ್ಣ ಕಾರ್ಖಾನೆಗಳಲ್ಲಿ ಮೂತ್ರಕೋಶದ ಗಂತಿ ವಿರಳವಾಗಿದೆ. ವಿಕಿರಣದ ಎದುರು ಎಲ್ಲರೂ ರಕ್ಷಿತರಾಗಬೇಕೆಂದು ಕಾನೂನುಗಳಿವೆ. ವಿವಿಧ ವಿಕಿರಣಮಾಪಕಗಳು ಬಳಕೆಯಲ್ಲಿವೆ-ಗೀಗರ್ ಮುಲ್ಲರ್ ಗುಣಕ (ಕೌಂಟರ್), ಕೊಡುಗೆಮಾಪಕ (ಡೋಸಿಮೀಟರ್), ಪಟಲ ಪದಕ (ಫಿಲ್ಮ್ ಬ್ಯಾಡ್ಜ್) ಇತ್ಯಾದಿ. ಬಾಳಿನುದ್ದಕ್ಕೂ ಮಾನಿತ ವಿಕಿರಣತೆಯ ಪ್ರಮಾಣದ ಘಟ್ಟವೂ ನಿಶ್ಚಿತವಾಗಿದೆ. ಸೀಸದ ಮುಂಕವಚ (ಏಪ್ರನ್) ಕೈಗವುಸುಗಳೂ ಈ ಕೆಲಸಗಾರರನ್ನು ಕಾಪಿಡುತ್ತವೆ.
ಎಳೆಯದರಲ್ಲಿ ಏಡಿಗಂತಿ ಚಿಕಿತ್ಸೆ : ಏಡಿಗಂತಿ ಕೊಲ್ಲುವಷ್ಟೇ ಜನರನ್ನು ವಿಳಂಬವೂ ಕೊಲ್ಲುತ್ತದೆ. ಯಾವ ರೋಗವನ್ನೇ ಆಗಲಿ ತಡಮಾಡದೆ ಬೇಗನೆ ಚಿಕಿತ್ಸೆ ಕೈಗೊಳ್ಳುವುದು ಬಲು ಒಳ್ಳೆಯದು. ಮರವಾಗಿ ಬೆಳೆಯ ಬಿಡುವುದಕ್ಕಿಂತ ಏಡಿಗಂತಿಯನ್ನು ಚಿಗುರಿನಲ್ಲಿ ಚಿವುಟುವುದು ಸುಲಭ. ಜನರು ವಿಳಂಬಮಾಡುವ ಕಾರಣಗಳು ಅಂಜಿಕೆ 75%, ಅಜ್ಞಾನ 20%, ಇತರ ಕಾರಣಗಳು 5%,

ಏಡಿಗಂತಿಯ ಗುಣಕಾರಕ ವೇಗಗಳು
ಅಂಗ
ಶೀಘ್ರ ಚಿಕಿತ್ಸೆ (%)
ವಿಳಂಬಿತ ಚಿಕಿತ್ಸೆ (%)

ದನಿನಾಳ
ತುಟಿ
ಬಾಯಿ
ಚರ್ಮ
ತರಡು (ಬೀಜ)
ಗರ್ಭಕಂಠ
ಮೂತ್ರಕೋಶ
ಸ್ತನ
75
85
60
90
75
70
50
70/75
5
15
5
30
15
10
15
10

ಏಡಿಗಂತಿಯ ಚಿಕಿತ್ಸೆ : ಏಡಿಗಂತಿ ನಿರ್ಮೂಲಕ್ಕೆ ಶಸ್ತ್ರವೈದ್ಯ ಹಾಗೂ ವಿಕಿರಣ ರೋಗ ಚಿಕಿತ್ಸೆ (ರೇಡಿಯೋತೆರಪಿ) ನೆರವಾಗುತ್ತವೆ. ಇವೆರಡನ್ನೂ ಬೇರೆ ಬೇರೆಯಾಗೋ ಒಟ್ಟಾಗೋ ಬಳಸಬಹುದು. ಗುಣವಾದ ಗಂತಿಯ ಶಮನ ಇವೆರಡರಿಂದಲೂ ರಾಸಾಯನಿಕ ರೋಗ ಚಿಕಿತ್ಸೆಯಿಂದಲೂ (ಕೀಮೋತೆರಪಿ) ಸಾಧ್ಯ.

ಶಸ್ತ್ರವೈದ್ಯ : ತಾಂತ್ರಿಕತೆಯ ಮುನ್ನಡೆ, ಏಡಿಗಂತಿ ಬೆಳೆತನ ಹೆಚ್ಚಿನ ತಿಳಿವಳಿಕೆ ಅರಿವಳಿಕೆ-ಇವು ಶಸ್ತ್ರವೈದ್ಯದ ಉಪಯುಕ್ತತೆಯನ್ನು ಮೈಯಲ್ಲಿ ಏಳುವ ಎಲ್ಲ ತೆರನ ಗಂತಿಗಳಿಗೂ ಪಸರಿಸಿವೆ. ಶಸ್ತ್ರವೈದ್ಯದ ಸೂತ್ರಗಳಿವು-ಗಂತಿಯ ಬುಡಮುಟ್ಟ ಕೊಯ್ತೆಗೆತ, ಮೊದಲು ರೋಗಹತ್ತಿದ ನೇರಹರಡಿಕೆ ಪಾಲ್ಗೊಳ್ಳುವ ಪಕ್ಕಪಕ್ಕದ ಹಾಗೂ ಹಾಲುರಸ ಬಸಿವ ಊತಕಗಳನ್ನೆಲ್ಲ ಒಟ್ಟಿಗೆ ತೆಗೆಯುವುದು. ಈ ನಿರ್ಮೂಲನ ಶಸ್ತ್ರಕ್ರಿಯೆಯ ಮೊದಲ ಉತ್ಸಾಹಕ್ಕೆ ಬದುಕುಳಿವವರ ಅಂಕಿಯ ಎದ್ದುಕಾಣುವ ಹೆಚ್ಚಳದ ಆಧಾರ ಇನ್ನೂ ದೊರತಿಲ್ಲ.

ವಿಕಿರಣ ಚಿಕಿತ್ಸೆ : ಕೆಲವು ಗಂತಿಗಳಿಗೆ ಇದು ಗುಣಪ್ರದ. ಏಳೆಯ ಮೇಲ್ಮೈಲಿರುವ ಸುಲಭಸಾಧ್ಯಗಳಲ್ಲಿ ಬಹು ಫಲಕಾರಿ. ಹರಡಿರುವ ಗಂತಿಗಳ ನಿರ್ವಹಣೆಗೆ (ಉದಾ : ಮೊಲೆಯಿಂದ ಮೂಳೆಗೆ ಹರಡಿಹೋದ) ಹಲವೇಳೆ ಫಲಯುಕ್ತ. ಶಸ್ತ್ರಕ್ರಿಯೆ ಆದ ಮೇಲೆ ಶಲ್ಯಕ್ಕೆ (ಸ್ಕಾಲ್ಪೆಲ್) ಸಿಗದಿರುವ ಏಡಿಗಂತಿ ಕ್ಷಣಗಳ ನಾಶಕ್ಕೆ ಫಲಪ್ರದ, ವಿಕಿರಣ ಚಿಕಿತ್ಸೆಯನ್ನು ಶಸ್ತ್ರಕ್ರಿಯೆ ಅಥವಾ ರಸಾಯನರೋಗ ಚಿಕಿತ್ಸೆಯೊಡನೆ ಸೇರಿಸಿದರೆ ಹಲವಾರು ಸಲ ಒಂದೇ ವಿಧಕ್ಕಿಂತ ಹೆಚ್ಚು ಫಲಕಾರಿ.
ಎಕ್ಸ್ ಕಿರಣಗಳು, ವಿಕಿರಣ ಕಿರಣಗಳು, ವಿಕಿರಣಶೀಲ ಐಸೊಟೋಪುಗಳು [ಗುರಾಣಿಕ (ಥೈರಾಯ್ಡ್) ಗ್ರಂಥಿಯ ಗಂತಿಗೆ ವಿಕಿರಣಶೀಲ ಅಯೊಡಿನ್], ಕೋಬಾಲ್ಟ್-60 ಬಳಕೆಯಲ್ಲಿವೆ. ಅತ್ಯಧಿಕ ವೋಲ್ಟ್ ಹರಿವಿನ ಕಿರಣಾವಳಿಗಳಿಂದ ಆಳದಲ್ಲಿರುವ ಗಂತಿಗಳ (ಪುಪ್ಪುಸ, ಅನ್ನನಾಳ) ಚಿಕಿತ್ಸಾಫಲದ ನಿರ್ಣಯವಿನ್ನೂ ಆಗುವುದರಲ್ಲಿದೆ. ಇವನ್ನು ಸರಿಯಾಗಿ ಬಳಸಿದರೆ, ರೋಗಿ ತಿಂಗಳು ಅಥವಾ ವರ್ಷಗಟ್ಟಲೆ ಚೈತನ್ಯಕರ, ನೋವಿಲ್ಲದ ಉಪಯುಕ್ತವಾದ ಜೀವನವನ್ನು ಸಾಗಿಸಬಹುದು.

ರಸಾಯನ ರೋಗಚಿಕಿತ್ಸೆ : ಗಂತಿಕಣಗಳ ಮೇಲೆ ಫಲಕಾರಿಯಾಗುವ ಮದ್ದು ಕಂಡುಹಿಡಿದ ಯತ್ನ ಇನ್ನೂ ಕೈಗೂಡಿಲ್ಲ. ಮುಖ್ಯವಾಗಿ ಹರಡಿದ ಗಂತಿಗಳಲ್ಲಿ ಬಿಳಿಕಣರಕ್ತತೆ ಹಾಗೂ ವಿಕಿರಣತೆ ಮತ್ತು ಶಸ್ತ್ರಕ್ರಿಯೆಗಳಿಗೆ ಸಹಾಯಕವಾಗಿ ರಸಾಯನರೋಗ ಚಿಕಿತ್ಸೆಯನ್ನು ಬಳಸುತ್ತಾರೆ.
ಏಡಿಗಂತಿ ಮೇಲೆ ಪ್ರಭಾವತೋರುವ ಎಷ್ಟೊ ಮದ್ದುಗಳನ್ನು ನೋಡಿದ್ದಾಗಿದೆ. ಈಗ ಬಳಕೆಯಲ್ಲಿರುವುವು : 1. ವಿಕಿರಣ ಅಣಕಗಳು (ರೇಡಿಯೋಮಿಮೆಟಿಕ್ಸ್), 2. ಜೀವವಸ್ತು ರೋಧಕಗಳು (ಆಂಟಿಮೆಟಬೊಲೈಟ್ಸ್), 3. ಜೀವಿವಿರೋಧಕಗಳು (ಆಂಟಿಬಯೋಟಿಕ್ಸ್), 4. ಚೋದನಿಕಗಳು, 5. ಆಲ್ಕಲಾಯಿಡ್ಸ್.
ಭವಿಷ್ಯ ಸೂಚಿ : ಅನುದಿನ ಸತತ ಸುಧಾರಣೆಯಾಗುತ್ತಿರುವ ಚಿಕಿತ್ಸಾವಿಧಾನಗಳು, ಬಹುಕಾಲ ಕವಿದಿದ್ದ ಕಾರ್ಗತ್ತಲಿನ ಮೇಲೆ, ಬೆಳಕು ಹರಿಸಿ ಆಶಾದಾಯಕ ಗಂತಿಚಿಕಿತ್ಸೆಗೆ ಭರವಸೆಯನ್ನೀಯುತ್ತಿವೆ.
(ಜಿ.ಟಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ